ಖಿನ್ನತೆ	

	ಮನೋರೋಗದ ಒಂದು ಲಕ್ಷಣ (ಡಿಪ್ರೆಷನ್). ಆಲಸ್ಯ, ನಿರಾಸಕ್ತಿ, ಛಾನಸ ಇವು ಇದರ ಲಕ್ಷಣಗಳು. ರೋಗಲಕ್ಷಣ ಕೆಲವು ಮೇಳೆ ತೀವ್ರವಾಗಿ ಹೆಚ್ಚಿನ ಮನೋವಿಕೃತಿಗೂ ಎಡೆಮಾಡಿಕೊಡಬಹುದು. ಖಿನ್ನತೆಯಿಂದ ಕೂಡಿರುವ ವ್ಯಕ್ತಿ ತನ್ನ ಬಾಹ್ಯ ಜಗತ್ತಿನಲ್ಲಿ-ಅಷ್ಟೇ ಏಕೆ, ತನ್ನ ಇಡೀ ಜೀವನದಲ್ಲಿ-ಕ್ರಮೇಣ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ. ವ್ಯಸನಿಯಾಗಿ, ಎದೆಗುಂದಿದವನಾಗಿ, ನಿರುತ್ಸಾಹಿಯಾಗಿ ಕಾಣುತ್ತಾನೆ. ಯಾವುದೇ ಕಾರ್ಯದಲ್ಲಿ ನಿರತನಾಗಲು ಒಲವು ತೋರುವುದಿಲ್ಲ; ಆಲ್ಪಶ್ರಮದ ಕೆಲಸಗಳನ್ನು ಮಾಡಲು ಸಹ ತುಂಬ ಪ್ರಯಾಸಪಟ್ಟುಕೊಳ್ಳುತ್ತಾನೆ, ಅವನ ಆಲೋಚನಾ ವಿಧಾನವೇ ಕುಂಠಿತವಾಗುತ್ತದೆ, ಮಂದಗತಿಯದಾಗುತ್ತದೆ. ಜಡತೆ ಆವನನ್ನು ಆಕ್ರಮಿಸುತ್ತದೆ. ಸದಾ ಬಗ್ಗಿದ ನಿಲವು, ಕಾಂತಿ ರಹಿತ ಕಣ್ಣುಗಳು, ದುಃಖದಿಂದ ಕೂಡಿದ ಮುಖಭಾವ-ಇದು ಅವನ ಸಾಮಾನ್ಯ ಚಿತ್ರಣ. ಆತ ತನ್ನ ಬಗೆಗೇ ತಾನು ತಾತ್ಸಾರಪಟ್ಟುಕೊಳ್ಳುತ್ತಾನೆ. ತಾನು ಯಾವ ಕೆಲಸಕ್ಕೂ ಬಾರದ ನಿರುಪಯೋಗಿ ಎನ್ನುವ ಭಾವನೆ ಅವನಲ್ಲಿ ಮೊಳೆಯುತ್ತದೆ. ಅವನಿಗೆ ಸ್ವಲ್ಪವೂ ಆತ್ಮವಿಶ್ವಾಸವಿರುವುದಿಲ್ಲ. ತಾನೊಬ್ಬ ಅಪರಾಧಿ, ಮಹಾಪಾಪಿ ಎನ್ನುವ ಭ್ರಾಂತಿ ಅವನನ್ನು ಕಾಡುತ್ತದೆ. ಭವಿಷ್ಯ ಅವನಿಗೆ ಕರಾಳವಾಗಿ ತೋರುತ್ತದೆ, ಜಗತ್ತೆಲ್ಲವೂ ನಿರಾಶಾದಾಯಕವೆನಿಸುತ್ತದೆ. ಮಾನಸಿಕ ಖಿನ್ನತೆ ದೇಹದ ಮೇಲೆ ತನ್ನ ಪರಿಣಾಮ ಬೀರುತ್ತದೆ. ಹಸಿವೆ ಕಡಿಮೆಯಾಗುತ್ತದೆ. ನಿದ್ದೆ ಮಾಡಲಾಗುವುದಿಲ್ಲ. ತೀವ್ರವಾದ ಮಲಬದ್ಧತೆ ಉಂಟಾಗುತ್ತದೆ. ಹೀಗಾದಾಗ ಕೆಲವರು ಆತ್ಮಹತ್ಯೆಗೆ ಕೂಡ ಯತ್ನಿಸುತ್ತಾರೆ.

	ಒಬ್ಬನೇ ರೋಗಿಯಲ್ಲಿ ಮೇಲೆ ಹೇಳಿದ ಎಲ್ಲ ಲಕ್ಷಣಗಳೂ ತೋರಬಹುದು. ಅಥವಾ ಕೆಲವು ಲಕ್ಷಣಗಳು ಮಾತ್ರವೇ ತೋರಬಹುದು. ಲಕ್ಷಣಗಳ ತೀವ್ರತೆಯಲ್ಲಿ ಸಹ ರೋಗಿಯಿಂದ ರೋಗಿಗೆ ವ್ಯತ್ಯಾಸವಿರುತ್ತದೆ. ಸಾಧಾರಣವಾಗಿ ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಖಿನ್ನತೆಯನ್ನು ವ್ಯಕ್ತಪಡಿಸಿಯೇ ಇರುತ್ತಾರೆ. ಆತ್ಮೀಯರೊಬ್ಬರು ಅಗಲಿದಾಗ ಇಲ್ಲವೆ ಆಳಿದಾಗ, ವ್ಯಾಪಾರದಲ್ಲೋ ಜೂಜಿನಲ್ಲೋ ಭರಿಸಲಾಗದ ನಷ್ಟವನ್ನು ಅನುಭವಿಸಿದಾಗ ಜನ ಹತಾಶರಾಗುತ್ತಾರೆ. ಖಿನ್ನತೆಯನ್ನು ಪ್ರದರ್ಶಿಸುತ್ತಾರೆ. ಆದರೆ ಆ ಬಗೆಯ ಅನುಭವ ತಾತ್ಕಾಲಿಕ. ಅದೇ ಅನುಭವ ತೀವ್ರವಾಗಿ ದೀರ್ಘಕಾಲದವರೆಗೆ ಮುಂದುವರಿದುಕೊಂಡು ಹೋಗಿ ವ್ಯಕ್ತಿಯ ಹೊಂದಾಣಿಕೆಯನ್ನು ಅಸ್ತವ್ಯಸ್ತಗೊಳಿಸಿದಾಗ ಅದು ಮನೋರೋಗದ ಲಕ್ಷಣವಾಗಿ ಪರಿಣಮಿಸುತ್ತದೆ.

	ಖಿನ್ನತೆಯ ಮಟ್ಟ ತುಂಬ ಲಘುವಾಗಿದ್ದರೆ ಅದರ ಪರಿಣಾಮವೂ ಲಘುವಾಗಿರುತ್ತದೆ. ರೋಗಿ ತನ್ನ ಮನಸ್ಸನ್ನು ಯಾವುದೇ ಕೆಲಸದಲ್ಲಿ, ಅಲೋಚನೆಯಲ್ಲಿ ಹೆಚ್ಚು ಕಾಲ ನೆಲೆಗೊಳಿಸಲಾರ. ಆತ್ಮವಿಶ್ವಾಸವಿಲ್ಲದೆ, ನಿದ್ರೆ ಬಾರದೆ, ಬೇಸರ, ಕಿರಿಕಿರಿ, ದೇಹಾಲಸ್ಯಗಳಿಂದ ಆತ ತೊಳಲಾಡುತ್ತಾನೆ. ಖಿನ್ನತೆ ಅತಿರೇಕಾವಸ್ಥೆಗೆ ಏರಿದಾಗ ರೋಗಿ ನಿಶ್ಚೇಷ್ಟಿತನಾಗುತ್ತಾನೆ. ಮಾತನಾಡುವುದೂ ಇಲ್ಲ. ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುವುದೂ ಇಲ್ಲ. ತಾನೇ ತಾನಾಗಿ ಆಹಾರವನ್ನು ಸಹ ತೆಗೆದುಕೊಳ್ಳುವುದಿಲ್ಲ. ಆತನ ಮಲಮೂತ್ರಗಳನ್ನು ಕೂಡ ಕೃತಕ ವಿಧಾನಗಳ ಮೂಲಕ ಹೊರತೆಗೆಯಬೇಕಾಗುತ್ತದೆ. ಲಘುಖಿನ್ನತೆ ಮತ್ತು ವಿಣ್ಣಜಡತ್ವ ಈ ಎರಡು ಅಂತ್ಯಗಳ ನಡುವೆ ಬೇರೆ ಬೇರೆ ಮಟ್ಟದ, ತೀವ್ರತೆಯಲ್ಲಿ ವ್ಯತ್ಯಾಸವುಳ್ಳ ಖಿನ್ನತೆಯ ಸ್ತರಗಳನ್ನು, ಪ್ರತಿಕ್ರಿಯೆಗಳನ್ನು ಗುರುತಿಸಬಹುದು.

	ಖಿನ್ನತೆಗೆ ಎಡೆಮಾಡಿಕೊಡುವ ಎರಡು ಸಂಗತಿಗಳೆಂದರೆ ಆತ್ಮಗೌರವಕ್ಕೆ ಒದಗಿ ಬರುವ ಧಕ್ಕೆ ಇಲ್ಲವೆ ಪ್ರಿಯವಾದ ವಸ್ತುವೊಂದರ ನಷ್ಟ, ಅತ್ಮೀಯರ ಸಾವು, ಆರ್ಥಿಕ ನಷ್ಟ, ಸಾಮಾಜಿಕ ಅಪಮಾನ ಈ ಮೊದಲಾದುವು ಖಿನ್ನತೆಗೆ ಎಡೆಮಾಡಿಕೊಡುವ ಅಂಶಗಳು. ಈ ಬಗೆಯ ನಷ್ಟ ಅಥವಾ ನೋವನ್ನು ಅನುಭವಿಸಿದಾಗ ವ್ಯಕ್ತಿ ತಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ, ಪ್ರಪಂಚ ಬರೀ ಶೂನ್ಯ, ಯಾರೂ ತನ್ನನ್ನು ಪ್ರೀತಿಸುವುದಿಲ್ಲ. ತಾನು ಒಬ್ಬಂಟಿಗ-ಎಂಬ ಭಾವನೆಗಳನ್ನು ಬೆಳೆಸಿಕೊಳ್ಳುತ್ತಾನೆ. ಖಿನ್ನತೆಗೆ ಫ್ರಾಯ್ಡ್ ಪ್ರಿಯವಸ್ತುವಿನ ನಷ್ಟಕ್ಕಾಗಿ ತೋರುವ ಅತೀವವಾದ ಹಾಗೂ ಅಪಸಾಮಾನ್ಯವಾದ ದುಃಖ ಎಂಬುದಾಗಿ ವ್ಯಾಖ್ಯಾನ ಮಾಡಿದ್ದಾನೆ. ಸಾಮಾನ್ಯವಾಗಿ ದುಃಖವೆಂದರೆ ಪ್ರಜ್ಞಾಪೂರ್ವಕವಾಗಿ ಅನುಭವಿಸಿದ ನಷ್ಟಕ್ಕಾಗಿಯೇ ವ್ಯಕ್ತಿ ತೋರುವ ಪ್ರಜ್ಞಾಪೂರ್ವಕವಾದ ಪ್ರತಿಕ್ರಿಯೆ. ಆದರೆ ಖಿನ್ನತೆಯಲ್ಲಿ ವ್ಯಕ್ತಿಗೆ ತನಗಾದ ನಷ್ಟದ ಅರಿವಿರುವುದಿಲ್ಲ. ಇದ್ದರೂ ಅದು ಮನಸ್ಸಿನ ಮೇಲೆ ಮಾಡಿರುವ ಪರಿಣಾಮ ತೀವ್ರತಮವಾಗಿರುತ್ತದಾಗಿ ಯಾವ ಸಮಾಧಾನದಿಂದಲೂ ವ್ಯಕ್ತಿಯ ಖಿನ್ನತೆ ಕಡಿಮೆಯಾಗುವುದಿಲ್ಲ.

	ಫ್ರಾಯ್ಡನ ಪ್ರಕಾರ ಖಿನ್ನವ್ಯಕ್ತಿಯಲ್ಲಿ ಕಾಣಬರುವ ಅತಿ ಆತ್ಮಾವಹೇಳನ ವಾಸ್ತವವಾಗಿ ಆ ವ್ಯಕ್ತಿ ಪ್ರೀತಿಸುವ ಇನ್ನಾವುದೇ ಬೇರೊಬ್ಬ ವ್ಯಕ್ತಿ ಅಥವಾ ವಸ್ತುವನ್ನು ಕುರಿತದ್ದಾಗಿರುತ್ತದೆ. ಆ ಬೇರೊಬ್ಬ ವ್ಯಕ್ತಿ ಅಥವಾ ವಸ್ತುವಿನ ಬಗೆಗಿರುವ ಪ್ರೀತಿಯ ಭಾವನೆ ಮತ್ಸರದೊಂದಿಗೆ ಕೂಡಿದ್ದು ಸಂಕೀರ್ಣರೂಪ ತಾಳುತ್ತದೆ. ಪ್ರಜ್ಞೆಗೆ ಹೊರತಾಗಿರುವ ಈ ಸುಪ್ತ ಭಾವನೆಗಳು ಮತ್ತು ಆಕ್ರಮಣಕಾರಿ ವರ್ತನೆಗಳು ತಮ್ಮ ನಿಜವಾದ ಗುರಿಯತ್ತ ನಿರ್ದೇಶಿತವಾಗದೆ ಖಿನ್ನವ್ಯಕ್ತಿಯ ಆತ್ಮಾವಹೇಳನ ಮತ್ತು ಹತಾಶೆಯಲ್ಲಿ ಪರ್ಯವಸಾನಗೊಳ್ಳುತ್ತವೆ. ಈ ದೃಷ್ಟಿಯಿಂದ ಖಿನ್ನತೆಯನ್ನು ವಿಶ್ಲೇಷಿಸುವಲ್ಲಿ ಮನಸ್ಸು ಮತ್ತು ದೇಹ ಎರಡನ್ನೂ ಸೂಕ್ಷ್ಮವಾಗಿ ಪರೀಕ್ಷಿಸಿ ಚಿಕಿತ್ಸೆಯನ್ನು ಕೊಡಬೇಕಾಗುತ್ತದೆ. ಮನಸ್ಸಿನಲ್ಲಿ ಬೇರೂರಿರುವ ಖಿನ್ನತೆ ಹೋಗಲು ಬಹಳ ಕಾಲ ಬೇಕಾಗಬಹುದು. ಇದಕ್ಕೆ ಮನೆಯವರೆಲ್ಲರ, ವೈದ್ಯರ ಸಹಕಾರ ಅಗತ್ಯ. ಮೂಲಭೂತವಾದ ಕಾರಣಗಳೇನಿವೆ ಎಂಬುದನ್ನು ಗುರುತಿಸಿ ಅವು ನಿವಾರಣೆಯಾಗುವಂತೆ ಮಾಡುವುದು ಮೊದಲ ಕೆಲಸ. ಅದರಲ್ಲಿ ರೋಗಿಗೆ ನಂಬಿಕೆ ಹುಟ್ಟುವುದು ಸ್ವಲ್ಪ ಕಷ್ಟ. ತನಗೆ ಯಾರೂ ಮೋಸ ಮಾಡುತ್ತಿಲ್ಲ. ಎಲ್ಲರೂ ತನಗೆ ಅನುಕೂಲರಾಗಿದ್ದಾರೆ ಎಂಬ ಭರವಸೆ ಅವನಲ್ಲಿ ಮೂಡಬೇಕು. ಮೂಡಿದ್ದು ಮುಂದುವರಿಯಬೇಕು. ಜೊತೆಗೆ ಆಹಾರ ನಿದ್ರಾದಿಗಳಲ್ಲಿ ಪಥ್ಯ ಅಗತ್ಯವಾಗಬಹುದು. ಒಟ್ಟಿನಲ್ಲಿ ಪರಿಸರ ಬದಲಾವಣೆಯಿಂದಲೂ ಉಚಿತ ಔಷಧ ಪಥ್ಯದಿಂದಲೂ ರೋಗ ನಿಧಾನವಾಗಿ ಗುಣವಾಗುತ್ತದೆ.							(ಎಚ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ